ಆನ್ವೀಕ್ಷಿಕೀ -
ಪ್ರಾಚೀನ ಭಾರತದ ರಾಜ್ಯತಂತ್ರ ವಿಧಾನದ ರೀತ್ಯ ರಾಜಕುಮಾರ ಅಗತ್ಯ ಪಡೆಯಬೇಕಾದ ವಿದ್ಯೆಗಳಲ್ಲಿ ಒಂದು. ಈ ಸಾಲಿನಲ್ಲಿ ಅನ್ವೀಕ್ಷಿಕೀ, ತ್ರಯೀ (ವೇದಗಳು), ವಾರ್ತಾ (ಅರ್ಥಶಾಸ್ತ್ರ), ದಂಡನೀತಿ (ರಾಜ್ಯತಂತ್ರ) ಎಂಬ ನಾಲ್ಕು ವಿದ್ಯೆಗಳ ಹೆಸರುಗಳಿವೆ. ಗೌತಮತ್ರಯೀ ಮತ್ತು ಅನ್ವೀಕ್ಷಿಕೀಗಳೆರಡನ್ನು ಮನುಸ್ಮøತಿಗಿಂತ ಭಿನ್ನ ಪಂಥದವರಾದ ಮಾನವ ಪಂಥದವರು ತ್ರಯೀ, ವಾರ್ತಾ, ದಂಡನೀತಿಗಳನ್ನು ಬಾರ್ಹಸ್ಪತ್ಯರು ವಾರ್ತಾ ಮತ್ತು ದಂಡನೀತಿಗಳೆರಡನ್ನು ಔಷನನರು ದಂಡನೀತಿಯೊಂದನ್ನು ಪ್ರಸ್ತಾಪಿಸಿದ್ದಾರೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಸಾಂಖ್ಯಯೋಗ ಮತ್ತು ಲೋಕಾಯತ ದರ್ಶನಗಳು ಅನ್ವೀಕ್ಷಿಕೀಯಲ್ಲಿ ಒಂದು ರೀತಿಯಲ್ಲಿ ಸಮ್ಮಿಳಿತವಾಗಿದೆ ಎಂದು ಹೇಳುತ್ತಾನೆ. ಶ್ರುತಿಯನ್ನು ಅವಲಂಬಿಸಿರುವ ವೇದವೇದಾಂತಗಳಲ್ಲದೆ ಪೂರ್ವಮೀಮಾಂಸೆ ಮತ್ತು ಉತ್ತರ ಮೀಮಾಂಸೆ ಅಥವಾ ವೇದಾಂತಗಳನ್ನೂ ಒಳಗೊಂಡಿರುವ ತ್ರಯೀ ವಿದ್ಯೆಗೆ ಎದುರಾಗಿ, ಅನ್ವೀಕ್ಷಿಕೀ ಎಂಬ ಶಬ್ದ ವೇದದಿಂದ ನೇರವಾಗಿ ಉದ್ಭವಿಸದೆ ನಾಮಮಾತ್ರಕ್ಕೆ ಅದರ ಪ್ರಭುತ್ವವನ್ನು ಒಪ್ಪಿಕೊಂಡಿರುವ ಸಾಂಖ್ಯಯೋಗಗಳನ್ನೂ ಅಥವಾ ವೇದಬಾಹಿರವಾದ ಲೋಕಾಯತಾದಿ ದರ್ಶನಗಳನ್ನೂ ದ್ಯೋತಿಸುತ್ತದೆ ಎಂದು ಕೌಟಿಲ್ಯ ಭಾವಿಸಿರುವಂತೆ ತೋರುತ್ತದೆ. (ಮೊದಲನೆಯ ವರ್ಗದಲ್ಲಿ ವೈಶೇಷಿಕ ಮತ್ತು ನ್ಯಾಯಗಳನ್ನೂ ಎರಡನೆಯದರಲ್ಲಿ ಬೌದ್ಧ ಮತ್ತು ಜೈನಧರ್ಮಗಳನ್ನೂ ಕೌಟಿಲ್ಯ ಏಕೆ ಸೇರಿಸಲಿಲ್ಲವೋ ವಿಶದವಾಗಿಲ್ಲ). ಇದು ತೀರ ಅಸಂಭವವೆಂದು ತೋರಿದರೂ ಬಹುಶಃ ಕೌಟಿಲ್ಯ ಲೋಕಾಯತ ಎಂಬ ಪದವನ್ನು ಅದರ ಪಾರಿಭಾಷಿಕಾರ್ಥವಾದ ಲೋಕಸತ್ತಾವಾದದಲ್ಲಿ ಉಪಯೋಗಿಸದೆ ಲೋಕಾನುಭವಜನ್ಯ ಜ್ಞಾನವೆಂಬ ಅರ್ಥದಲ್ಲಿ ಉಪಯೋಗಿಸಿರಬಹುದೆಂದು ಕಾಣುತ್ತದೆ. ತ್ರಯೀ ವಿದ್ಯೆಯಲ್ಲಿ ಶ್ರದ್ಧೆಗೆ ಹೆಚ್ಚು ಪ್ರಾಶಸ್ತ್ಯ ದೊರೆತಿದೆಯೆಂದೂ ಆನ್ವೀಕ್ಷಿಕೀಯಲ್ಲಿ ಅನ್ವೀಕ್ಷೆಗೆ, ಎಂದರೆ ವಿಚಾರಕ್ಕೆ ಹೆಚ್ಚು ಪ್ರಾಶಸ್ತ್ಯ ದೊರೆಯಬೇಕೆಂದೂ ಇಲ್ಲಿ ಸೂಚಿತವಾಗಿರುವಂತೆ ಕಾಣುತ್ತದೆ. ಸುತರ್ಕದಿಂದ ಒಳ್ಳೆಯದಾವುದು, ಕೆಟ್ಟದಾವುದು ಎಂಬುದನ್ನು ವೈದಿಕಮತದಿಂದಲೂ ಲಾಭದಾಯಕ ಯಾವುದು ನಷ್ಟಕಾರಕ ಯಾವುದು ಎಂಬುದನ್ನು ಅರ್ಥಶಾಸ್ತ್ರದಿಂದಲೂ ಯುಕ್ತವಾದ ನೀತಿ ಯಾವುದು ಆಯುಕ್ತವಾದುದು ಯಾವುದು ಎಂಬುದನ್ನು ರಾಜ್ಯತಂತ್ರದಿಂದಲೂ ತಿಳಿದುಕೊಂಡು ವಿಶಿಷ್ಟ ಪರಿಸ್ಥಿತಿಗಳಲ್ಲಿ ಈ ಶಾಸ್ತ್ರಗಳ ಪೈಕಿ ಯಾವುದು ಸಮಂಜಸವೆಂಬುದನ್ನು ನಿರ್ಣಯಿಸುವುದರಲ್ಲಿ ಅನ್ವೀಕ್ಷಿಕೀ ಜನರಿಗೆ ತುಂಬ ಉಪಯುಕ್ತವಾಗುತ್ತದೆ. ದುಃಖದಲ್ಲೂ ಸಂತೋಷದಲ್ಲೂ ಮನಸ್ಸನ್ನು ಸ್ಥಿರವಾಗಿರಿಸುತ್ತದೆ. ತಿಳಿವಳಿಕೆಯಲ್ಲೂ ಮಾತಿನಲ್ಲೂ ಕಾರ್ಯದಲ್ಲೂ ಚಾಕಚಕ್ಯತೆಯನ್ನು ಉತ್ಪಾದಿಸುತ್ತದೆ. ಹೀಗೆಂದು ಕೌಟಿಲ್ಯ ಹೇಳಿದ್ದಾನೆ. ಕೌಟಿಲ್ಯ ಮೇಲಿನದರ ಜೊತೆಗೆ ಈ ಮಾತನ್ನು ಜೋಡಿಸಿದ್ದಾನೆ: ಅನ್ವೀಕ್ಷಿಕೀ ಎಲ್ಲ ಶಾಸ್ತ್ರಗಳ ದೀಪ, ಎಲ್ಲ ಕಾರ್ಯಗಳಿಗೂ ಸತ್‍ಸಾಧನ, ಎಲ್ಲ ಶಾಸನಗಳಿಗೂ ಕರ್ತವ್ಯಗಳಿಗೂ ಅಡಿಗಲ್ಲು.

	ಅನ್ವೀಕ್ಷಿಕೀಯನ್ನು ತಥ್ಯಪರಾಮರ್ಶೆ ಎಂದು ಭಾವಿಸಿ ಆ ಕಾರಣದಿಂದ ಅದು ತ್ರಯೀ ವಿದ್ಯೆಯ ಒಂದು ಶಾಖೆಯೆಂದು ಮಾನವಪಂಥದವರು ಭಾವಿಸಿರುವಂತಿದೆ. ಈಚೆಗೆ ಹೇತುವಿದ್ಯಾ, ನ್ಯಾಯವಿದ್ಯಾ ಮತ್ತು ತರ್ಕಶಾಸ್ತ್ರಗಳೊಂದಿಗೆ ಅನ್ವೀಕ್ಷಿಕೀ ಸಮೀಕೃತವಾಗಿದೆ. ನೇರವಾದ ಪ್ರತ್ಯಕ್ಷಾನುಭವ ಮತ್ತು ಆಗಮಶಾಸ್ತ್ರಗಳು ಎಂಬ ಎರಡು ದಾರಿಗಳಿಂದ ದೊರೆತ ಜ್ಞಾನವನ್ನು ಪುನಃ ಪರಿಶೀಲಿಸುವುದು ಅನ್ವೀಕ್ಷಿಕೀಯ ಲಕ್ಷಣವೆಂದು ಹೇಳಲಾಗಿದೆ. (ಪ್ರತ್ಯಕ್ಷಾಗಮಾಭ್ಯಾಂ ಈಕ್ಷಿತಸ್ಯ ಪಶ್ಚಾತ್ ಈಕ್ಷಣಂ ಅನ್ವೀಕ್ಷಾ ಸಾ ಪ್ರಯೋಜನಂ ಯಸ್ಯಾಃ-ಅಮರಕೋಶದ ಮೇಲೆ ಕ್ಷೀರಸ್ವಾಮಿಯ ವ್ಯಾಖ್ಯಾನ). 			
(ಆರ್.ಎನ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ